"ಅಕ್ಕಿ ರೊಟ್ಟಿ ಮತ್ತೂ ನಿಂಬು ಶರಬತ್ "..

ನನಗೆ ತುಂಬಾನೇ ಇಷ್ಟವಾದ ತಿಂಡಿಗಳಲ್ಲಿ ಒಂದು - ಮೊಗೆಕಾಯಿ ಮತ್ತು ಅಕ್ಕಿ ಹಿಟ್ಟಿನ ರೊಟ್ಟಿ .. ಊರಿಗೆ ಹೋದಾಗ ಯಾವಾಗಲು ಎದುರು ನೋಡುತ್ತಿದ್ದ ಗಳಿಗೆ ಅಂದರೆ ಅಜ್ಜಮ್ಮ ನನ್ನ ಅಕ್ಕರೆಯಿಂದ ಕರೆಯೋದು - ಮಗಳೇ ಬಾ ಅಕ್ಕಿ ರೊಟ್ಟಿ ಇಟ್ಟಿದ್ದೆ ನಿಂಗೆ ಹೇಳಿ, ಅಲ್ಲೇ ನಿಂಬು ಶರಬತ್ ಕೂಡಾ ಇದ್ದು ನೋಡು ಕುಡಿಯಲೇ ಮರಿಯಡ ಮತ್ತೆ ಅಡ್ಡಿಲ್ಯ :))

ಅಕ್ಕಿ ರೊಟ್ಟಿ ಅಂದ್ರೆ ನನಗೋ ಪ್ರಾಣ. ಅದರ ಜೊತೆ ಕಾಯಿ ಚಟ್ನೀ, ಬೆಲ್ಲ ತುಪ್ಪ, ಅಲ್ಲ ಚಟ್ನಿ ಪುಡಿ ಎಣ್ಣೆ ಹಚ್ಹ್ಕಂಡು ತಿಂದ್ರಂತು ಏನ್ ಸ್ವಾದಾ  :)  ಅದೇನು ಕೈ ರುಚಿಯೋ ಅಜ್ಜಮ್ಮಂದು ಮಾತ್ರಾ..

ಊರಿಗೆ ಹೋದ್ರೆ ಅಲ್ಲಿಯ ನನ್ನ ಮನೇಯವ್ರಿಗೆ ನಾನು ಅಲ್ಲಿ ಹೋಗಿದ್ದೆ ಹಬ್ಬ. ಕಾರಣ - ನನ್ನ  ಕಪಿಚೆಷ್ಟೆಗಳು, ಕಸಿನ್ಸ್ ಯೆಲಾರ್ನು ಕೂರ್ಸ್ಕೊಂದು ಇಸ್ಪೀಟಿನ ಆಟಗಳು, ಕಣ್ಣಾ ಮುಚಾಲೆ ಆಟ, ಮರಕೋತಿ ಆಟ, ಚೆನ್ನಾ ಮನ್ನೀ ಆಟ, ಗದ್ದೆಗಳಲ್ಲಿ ಮನೆಯಲ್ಲಿ ಎಲ್ಲಕಡೆ ನಮ್ಮ ರಾಧಾನ್ತಗಳು ಒಂದಾ ಎರಡಾ. ಇಡಿ ದಿನ ಆಟಾ ಆಟಾ :)

ನಾನು ಹುಟ್ಟಿದ್ದು ಒಂದು ಸುಂದರವಾದ ಹವ್ಯಕ ಬ್ರಾಹ್ಮಣರ ಮನೆಯಲ್ಲಿ. ಹಳ್ಳಿ ವಾತಾವರಣ, ಹಸಿರು ಪ್ರದೇಶ, ತೋಟ ಗದ್ದೆಗಳು, ಎತ್ತಿನ ಗಾಡಿಗಳು, ಪರಿಚಯವಿರಲಿ ಇಲ್ಲದೆ ಇರಲಿ ವಿಶ್ವಾಸದಿಂದ ಮಾತನಾಡಿಸೋ ಜನಗಳು - ಮನಸ್ಸಿಗೆ ಅದೇನೋ ನೆಮ್ಮದಿಯ ಅನುಭವ ಆಗೋದು ಉರಿಗೆ ಹೋದರೆ.

ಇನ್ನು ಅಲ್ಲಿಯ ಉಟ ತಿಂಡಿಗಳ ಬಗ್ಗೆ ಅಂತು ಇನ್ನೊಂದು ಮಾತಿಲ್ಲ ಬಿಡಿ.
ಅಪ್ಪೆಹುಳಿ, ತಂಬ್ಳಿ, ಮಾವಿನಹಣ್ಣಿನ ಸಾಸ್ಮೆ, ಅಮಟೆಕಾಯಿ ಗೊಜ್ಜು, ಹಲಸಿನ ಹಣ್ಣಿನ ಕೊಟ್ಟೆ ಕಡಬು, ಅತ್ಹ್ರಾಸಾ (ತುಪ್ಪದ್ ಜೊತೆ) - ಬಾಯಲ್ಲಿ ನೀರು ೧೦೦ ಪರ್ಸೆಂಟು ಅಹಹಹ.!! ಅರೆ - ಹವ್ಯಕರ ಒಂದು ಸ್ಪೆಷಾಲಿಟಿ ತಿಂಡಿ ಹೆಂಗೆ ಮರಿಯಲೇ ಸಾದ್ಯಾ - ತೆಳ್ಳವ್ವು - ಅದೇ ಇಲ್ಲಿ ಬೆಂಗಳೂರು ಭಾಷೆಯಲ್ಲಿ ನೀರು ದೋಸೆ :)  ತಿಂದವರ ಬಾಯಲ್ಲಿ ಇನ್ನು ಸ್ವಲ್ಪ ಮತ್ತು ಸ್ವಲ್ಪ ಅನ್ನೋ ರಾಗಾ ಗ್ಯಾರಂಟಿ.

ಒಹ್ ಅಜ್ಜಿ ಬಗ್ಗೆ ಹೇಳ್ತಾ ಇದ್ದೆ ಅಲಾ.
ರಜೆಗಳಲ್ಲಿ ನನ್ನ ಅಜ್ಜಿ ಹತ್ರಾ ಕುತ್ಕೊಂಡು ಒಂದು ರಾಶಿ ಹರಟೆ ಹೊಡಿಯೋದೆ ನಂದು ಒಂದು ದಿನನಿತ್ಯದ ಕಾರ್ಯಕ್ರಮ ಅನ್ನಿ. ಅವರಿಗೂ ಅಷ್ಟೇ ಮೊಮ್ಮಗಳು ಬೆಂಗಳೂರಿಂದ ಬರೋದು ವರ್ಷಕ್ಕೆ ಎರಡು ಸರ್ತಿ, ಅದು ಶಾಲೆಗೇ ರಜೆ ಬಿದ್ದಾಗ. ಈ ಸಮಯವನ್ನ ಕಳೆದುಕೊಳ್ಳಲು ಅವರಿಗೂ ಇಷ್ಟವಿಲ್ಲ. ಅದಕ್ಕೆ ಅವರು ನಾ ಹೇಳೋ ಕಾಗೆ ಗುಬ್ಬಚಿ ಪುರಾಣಗಳನ್ನ ಸಮಾಧಾನದಿಂದ ಕೇಳೋರು. ಅವರು ನಮಗೆ ಹಳೆಯ ಜಮಾನಾ ಕಥೆಗಳನ್ನ ಹೇಳ್ತಿದ್ರು. ಆ ಕಥೆಗಳು ನನ್ನ ಫ್ರೀಡಂ ಫೈಟರ್ ಅಜ್ಜನ ಬಗ್ಗೆ, ಅವರ ಕಾಲದ ಐಶಾರಾಮಿಗಳ ಬಗ್ಗೆ, ಶಾಸ್ತ್ರ ಸಿಧಾನ್ತಗಳ ಬಗ್ಗೆ ಆಗಿರುತಿದ್ದವು. ನಾನೋ ಆ ಕಥೆಗಳನ್ನ ಆಶ್ಚರ್ಯವಾಗಿ ಬಾಯಿ ಬಿಟ್ಕೊಂಡು ಕೇಳುತ್ತಿದ್ದೆ - ಹೌದಾ ಅಜ್ಜಮ್ಮ ಎಂದು :p  (ಎಲ್ಲರೂ ಅಜ್ಜಿ ಅಂದರೆ ನಾನು ಮಾತ್ರ ಪ್ರೀತಿಯಿಂದ ಅಜ್ಜಮ್ಮ ಹೇಳಿ ಕರೀತಿದ್ದೆ - ಅವರಿಗೂ ಅದೇ ಇಷ್ಟವಾಗೋದು)
ಮಕ್ಕಳೆಲ್ಲ ಮನೆಯ ಅಂಗಳದಲ್ಲಿ ಆಟವಾಡುತ್ತ ಜೋರು ಮಾತುಗಳು ಕೇಳಿಸಿದರೆ ಅವರು ಬಂದು ಹೇಳೋರು - "ಆಟ ಕೋಟಲೆ ಆಗ್ತು ಮತ್ತೆ." ಚಲೋ ಮಾಡಿ ಆದ್ಕಳವಪ. ಜಾಣ ಮಕ್ಕೋ ಅಲ್ದಾ :p

ನಿಂಗೋಕೆ ಗೆರ್ಬೀಜ ಕೊಡ್ತೆ, ಗೆಣಸು ಸುಟ್ಟಿದ್ದು ಇದ್ದು - ಯಾರ್ಯಾರಿಗೆ ಬೇಕು ಕೈ ಎತ್ತಿ ಅಂದ್ರೆ ನಾವೆಲ್ಲ ಒಂದೇ ಸಮನೆ ಸ್ಪ್ರಿಂಗ್ ಥರ ಕುಣಿದುಬಿದುತ್ತಿದ್ದೆವು.
ಗೆರ್ಬೀಜ, ಗೆಣಸು ಸುಡೋದು ಹೇಗೆ ಹೇಳಿ - ಮಣ್ಣಿನ ವಲೆಯಲ್ಲಿ ಕೆಂಡದ ಮೇಲೆ. ಅದರ ರುಚಿ ನೆ ಬೇರೆ.
ನನ್ನ ದೊಡ್ಡ ಮಾವ ನಮ್ಮನ್ನೆಲ್ಲ ಎತ್ತಿನ ಗಾಡಿಯಲ್ಲಿ ಹತ್ತಿಸಿಕೊಂಡು ತೋಟಕ್ಕೆ ಕರ್ಕೊಂಡು ಹೋಗೋರು. ಅಲ್ಲಿ ಪೆರ್ಲ ಹಣ್ಣು,
ಈಚಲ ಹಣ್ಣು, ಮಾವಿನಕಾಯಿ, ಹಲಸಿನ ಹಣ್ಣು ಎಲ್ಲ ಎಷ್ಟು ಬೇಕೋ ಕಿತ್ಕೊಂಡು ತಿನ್ನಲು ಪೆರ್ಮಿಷನ್ನು.
ವಾಹ್ ಅದೇನು ಸಮಯ. ಇವಾಗಲು ನೆನಪಿಸಿಕೊಂಡರೆ ಕಣ್ಣು ಹಾಗೆಯೆ ಅರಳುತ್ತದೆ :)
ಹೀಗೆ  ಬೆಳೆದು ಬಂದ ನಾನು ಈಗ ಸುಮಾರು ದಿನಗಳೇ ಕಳೆದಿದ್ದವು ಊರಿಗೆ ಹೋಗಿ. ಕೆಲಸದ ಒತ್ತಡ, ರಜೆ ಸಿಗುವುದಿಲ್ಲ. ಬರೀ ಒಂದು ಎರಡು ದಿನದ ಮಾತಿಗೆ ಹೋಗಲು ನನಗೆ ಇಷ್ಟವಿಲ್ಲ. ಒಂದು ಎರಡು ವಾರ ಊರಲ್ಲಿ ಟೆಂಟು ಹಾಕೋ ಪ್ಲಾನ್ ಹಾಕಿದವಳು ನಾನು.

ದೊಡ್ಡ ಮಾವ ಹೋದ ಸೆಪ್ಟೆಂಬರ್ ಅಲ್ಲಿ ತೀರಿಕೊಂಡರು. ಕಣ್ಣ ಮುಂದೆಯೇ ಬಾಳಿ ಬದುಕಬೇಕಾದ ಮಗ ಹೋದ ಕೊರಗಲ್ಲಿ ಅಜ್ಜಮ್ಮ ಕೂಡಾ ಮಾವಾ ಹೋದ ನಾಲ್ಕೈದು ತಿಂಗಳ ನಂತರ ನಮ್ಮನ್ನ ಅಗಲಿ ಹೊರಟೆ ಬಿಟ್ಟರು :((
ನಾ ಊರಿಗೆ ಹೋಗಿ ತಲಪುವುದಕ್ಕು ಅರ್ಧ ಘಂಟೆ ಮುಂಚೆ ಅಜ್ಜಮ್ಮ ಕಣ್ಣು ಮುಚಿದ್ದರಂತೆ. ಆ ದಿನ ನಾ ಬಹಳ ಆತ್ತಿದ್ದೆ. ಅವರ ಕೊನೆಯ ಕ್ಷಣದಲ್ಲಿ ಅವರ ಹತ್ತಿರ ಎರಡು ಮಾತು ಮಾತಾಡಲು ಆಗಲಿಲ್ವಲ್ಲ ಅಂತ. ಇನ್ನು ಒಂದು ಘಂಟೆ ಮೊದಲು ಬಂದಿದ್ದರೆ ಅವರು ನನಗೆ ಸಿಕ್ಕಿರೋರು ಅಲ್ವಾ.!!  ಎದೆಯೆಲ್ಲ ಭಾರವಾದಂತೆ, ಕಣ್ಣು ತೆರೆದು ಅವರು ಹೋಗಿರುವ ಸತ್ಯವನ್ನು ಓಪ್ಪಿಕೊಳ್ಳುವ ಧೈರ್ಯ ಇಲ್ಲದಂತೆ, ಗಂಟಲಲ್ಲಿ ಮಾತು ಮುಗಿದಂತೆ ಏನೇನೊ ಒಮ್ಮೆ ಅನಿಸಿತು. ಹಾಗೆ ಕುಸಿದು ಕೂತು ಹೋದೆ.

ಇಷ್ಟು ಬೇಗ ಅವರು ಹೋಗಿ ಒಂದು ವರ್ಷ ಆಗಿ ಹೋಯಿತು ನೋಡಿ. ಅವರ ವರ್ಶಾಂತಕಕ್ಕೆ ನಾನು ಊರಿಗೆ ಹೋಗಿದ್ದು.
ಅಂದುಕೊಂಡಂತೆಯೇ ಒಂದು ವಾರ ರಜೆ ಹಾಕಿ ಬಸ್ಸು ಹತ್ತಿಯೇಬಿಟ್ಟೆ. ಮನೆ ಅಂಗಳದಲ್ಲಿ ಕಾಲು ಇಟ್ಟಾಗ ಮೊದಲು ಕಂಡಿದ್ದು ಹಾಲ್ ಅಲ್ಲಿ ತೂಗಿ ಹಾಕಿರುವ ಅಜ್ಜಮ್ಮನ ಫೋಟೋ. ಕಣ್ಣಂಚಲಿ ಒಂದು ಹನಿ ಹನಿಯಿತು. ಕಣ್ಣು ಒರೆಸಿಕೊಂಡು ಒಳಗೆ ಕಾಲಿಟ್ಟೆ.

ಎಲ್ಲರಿಗೂ ಸಂತೋಷ ನಾನು ತಂಗಿ ಅಲ್ಲಿ ಹೋಗಿದ್ದು. ಕಸಿನ್ಸ್ ಸುಮಾರು ಜನ ಸೇರಿದ್ವಿ. ಆ ನಾಲಕ್ಕು ಐದು ದಿನಗಳಲಿ ಅದೆಷ್ಟು ಹರಟೆಗಳು, ಕಥೆಗಳು, ಆಟಗಳು, ಅದೆಷ್ಟು ನಗು .. ಗಂಟಲು ಕೆರೆಯೋ ಅಷ್ಟು ನಗು. ಅಭಾ ಇಷ್ಟು ನಕ್ಕು ಅದೆಷ್ಟು ದಿನಗಳೇ ಆಗಿ ಹೋಗಿದ್ದವು.

ಹೆಂಗೆ ಒಂದು ವಾರಾ ಮುಗಿಯಿತೋ ಗೊತ್ತೇ ಆಗಲಿಲ್ಲ. ವಾಪಸ್ ಬೆಂಗಳೂರು ಗಾಡಿ ಹತ್ತುವ ಸಮಯ ಬಂದೇಬಿಡ್ತು ನೋಡಿ. ಹೊರಡಲು ಒಂದು ಚೂರು ಮನಸ್ಸಿಲ್ಲ. ಆದರೆ ಗತಿ ಇಲ್ಲ ಎಂದು ಬಸ್ ಹತ್ತಿದೆ.

ಒಳ್ಳೆಯ ಕ್ಷಣಗಳ ನೆನಪಲ್ಲಿ :)

Comments

Popular posts from this blog

They say - some relations come with only a certain span of lifetime....after which they are just not there but you have ther swt memories :)